ಚಿಕುಪಾಧ್ಯಾಯ

17ನೆಯ ಶತಮಾನದ ಕನ್ನಡ ಕವಿ. ಶ್ರೀ ವೈಷ್ಣವ. ಮೈಸೂರು ರಾಜ ಚಿಕ್ಕದೇವರಾಜ ಒಡೆಯರ (1672-1704) ಆಸ್ಥಾನದಲ್ಲಿ ಕರಣಿ ಕಾಗ್ರೇಸರನಾಗಿಯೂ ಮಂತ್ರಿಯಾಗಿಯೂ ಇದ್ದವ. ಲಕ್ಷ್ಮಿಪತಿ ಎಂಬುದು ಇವನ ಹುಟ್ಟು ಹೆಸರಾಗಿರಬಹುದು. ತ್ರಿಕದಂಬಪುರ ಅಥವಾ ತೆರಕಣಾಂಬಿ ಈತನ ಜನ್ಮಸ್ಥಳ. ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ಪಂಡಿತನಾಗಿದ್ದ ಈತ ಯಾಚಕಜನಸಾರಧೇನು. ಸ್ವಜನ ಪರಜನ ಚಿಂತಾಮಣಿ, ಅಧೀತಸಕಲವೇದಶಾಸ್ತ್ರ ಪುರಾಣ ಮುಖ್ಯ ನಾನಾವಿಧ ವಿದ್ಯನಾಗಿ ಕವಿತಾವಾಕ್ಪತಿಯಾಗಿ ಹರಿಭಕ್ತಿ ರಸಾಸ್ವಾದನ ಪರನಾಗಿ ಇದ್ದವ. ಪಟ್ಟೂರಾಭಿದಾನ ಸತ್ಕುಲ ದೀಪ ಎಂಬುದಾಗಿ ತನ್ನನ್ನು ಕರೆದುಕೊಂಡಿದ್ದಾನೆ. ವ್ಯಾಸ, ವಾಲ್ಮೀಕಿ, ರುದ್ರಭಟ್ಟ, ಮಾಘ, ಬಾಣ ಮೊದಲಾದ ಪೂರ್ವ ಕವಿಗಳನ್ನು ಸ್ಮರಿಸಿದ್ದಾನೆ. ತನ್ನ ಪೋಷಕ ದೊರೆ ಚಿಕ್ಕದೇವರಾಯನ ವಂಶಾವಳಿ ಹಾಗೂ ವಿಜಯಗಳನ್ನು ತನ್ನ ಗ್ರಂಥಗಳ ಆದಿಭಾಗದಲ್ಲಿ ಹೇಳಿದ್ದಾನೆ.

ಚಿಕುಪಾಧ್ಯಾಯನ ಗ್ರಂಥರಾಶಿ ಅಪಾರ. ಚಂಪೂ, ಸಾಂಗತ್ಯ ಹಾಗೂ ಗದ್ಯಗಳಲ್ಲಿ ಸುಮಾರು ಇಪ್ಪತ್ತೆಂಟಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾನಲ್ಲದೆ ಟೀಕುಗಳನ್ನೂ ಕೆಲವು ಹಾಡುಗಳನ್ನೂ ಬರೆದಿದ್ದಾನೆ. ಇವನ ಕಾಲದವರೆಗೆ ಬೇರಾವ ಕವಿಯೂ ಈತನಷ್ಟು ಗ್ರಂಥಗಳನ್ನು ರಚಿಸಿರಲಾರನೆಂದು ಹೇಳಬಹುದು. ಇವನ ಗ್ರಂಥರಾಶಿಯನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.

ಚಂಪೂಕಾವ್ಯಗಳು . 1 ವಿಷ್ಣುಪುರಾಣ, 2 ರುಕ್ಮಾಂಗದ ಚರಿತೆ, 3 ಯದುಗಿರಿ ಮಹಾತ್ಮ್ಯೆ, 4 ಕಮಲಾಚಲ ಮಹಾತ್ಮ್ಯೆ, 5 ಹಸ್ತಿಗಿರಿ ಮಹಾತ್ಮ್ಯೆ, 6 ದಿವ್ಯಸೂರಿ ಚರಿತೆ, 7 ಸಾತ್ವಿಕಬ್ರಹ್ಮ ವಿದ್ಯಾವಿಲಾಸ, 8 ಅರ್ಥಪಂಚಕ.

ಸಾಂಗತ್ಯ : 1 ಯಾದವಗಿರಿ ಮಹಾತ್ಮ್ಯೆ 2 ಪಶ್ಚಿಮರಂಗ ಮಹಾತ್ಮೆ 3 ರಂಗಧಾಮಸ್ತುತಿ ಸಾಂಗತ್ಯ 4 ಶೃಂಗಾರಶತಕದ ಸಾಂಗತ್ಯ 5 ಪಶ್ಚಿಮ ರಂಗ ಸಾಂಗತ್ಯ 6 ಅಕ್ಷರಮಾಲಿಕಾ ಸಾಂಗತ್ಯ 7 ರಂಗಧಾಮನೀತಿಶತಕದ ಸಾಂಗತ್ಯ 8 ರಂಗಧಾಮಪುರಷವಿರಹದ ಸಾಂಗತ್ಯ 9 ಚಿತ್ರಶತಕ ಸಾಂಗತ್ಯ 10 ರಂಗನಾಯಕರಂಗನಾಯಕೀಸ್ತುತಿ ಸಾಂಗತ್ಯ.

ಗದ್ಯ : 1 ವಿಷ್ಣು ಪುರಾಣ 2 ವೆಂಕಟಗಿರಿ ಮಹಾತ್ಮೆ, 3 ಶ್ರೀರಂಗ ಮಹಾತ್ಮೆ 4 ಶೇಷ ಧರ್ಮ 5 ಕಾಮಂದಕ ನೀತಿ 6 ಶುಕಸಪ್ತತಿ.

ಹಾಡು ಮತ್ತು ಟೀಕುಗಳು : 1 ರಂಗಸ್ವಾಮಿಯ ಶೃಂಗಾರಸೂತ್ರೋದಾಹರಣೆ 2 ಶೃಂಗಾರದ ಹಾಡುಗಳು 3 ವೈದ್ಯಾಮೃತ ಟೀಕೆ 4 ತಿರುವಾಯ್ಮೊಳಿಟೀಕೆ.

ಇವುಗಳಲ್ಲಿ ಯಾದವಗಿರಿ ಮಹಾತ್ಮೆ, ಸಾತ್ವಿಕ ಬ್ರಹ್ಮವಿದ್ಯಾವಿಲಾಸ, ಅರ್ಥ ಪಂಚಕದ ಟೀಕೆ, ರಹಸ್ಯತ್ರಯ ಟೀಕೆ, ಭಾರದ್ವಾಜ ಸಂಹಿತೆ, ಅರ್ಥಪಂಚಕ ತತ್ತ್ವತ್ರಯ, ಮತ್ತು ದಿವ್ಯಸೂರಿ ಚರಿತೆ-ಇವು ವಿಶಿಷ್ಟಾದ್ವೈತ ಮತ ವಿವರಣ ರೂಪವಾದ ಗ್ರಂಥಗಳು. ಶ್ರೀರಂಗ ಮಹಾತ್ಮೆ, ಯಾದವಗಿರಿ ಮಹಾತ್ಮೆ (ಗದ್ಯ), ವೆಂಕಟಗಿರಿ ಮಹಾತ್ಮೆ-ಇವು ಸ್ಥಳ ಮಹಾತ್ಮೆಯನ್ನು ತಿಳಿಸುವ ಗಥಗಳು, ಶೇಷ ಧರ್ಮ, ವಿಷ್ಣುಪುರಾಣ (ಗದ್ಯ), ವಿಷ್ಣುಪುರಾಣ (ಚಂಪು), ರುಕ್ಮಾಂಗದ ಚರಿತೆ (ಚಂಪು)-ಇವು ಪುರಾಣಗಳ ಅನುವಾದಗಳು. ಚಿತ್ರಶತಕ, ನೀತಿಶತಕ, ಶೃಂಗಾರ ಶತಕ, ಪುರಷವಿರಹ, ರಂಗಸ್ವಾಮಿಯ ಶೃಂಗಾರ ಸೂತ್ರೋದಾಹರಣೆ (ಗದ್ಯ),-ಇವು ಕವಿತಾ ಚಮತ್ಕಾರ ಪ್ರದರ್ಶಕ ಗ್ರಂಥಗಳು. ಕಾಮಂದಕ ನೀತಿಸಾರ, ಶುಕಸಪ್ತತಿ-ಇವು ನೀತಿಬೋಧಕ ಗ್ರಂಥಗಳು.

ರಂಗಧಾಮ ಸ್ತುತಿ ಸಾಂಗತ್ಯ ಗ್ರಂಥ ರಂಗನಾಥನ ಪಾದಾದಿಕೇಶಾಂತ ವರ್ಣನೆಯನ್ನು ಒಳಗೊಂಡಿದೆ. ರಂಗಧಾಮ ಪುರಷವಿರಹ ಸಾಂಗತ್ಯದಲ್ಲಿ ರಂಗನಾಥ ದೇವರ ವಿರಹಸೂಚಕವಾದ ವ್ಯಂಗ್ಯೋಕ್ತಿ ಇದೆ. ನೀತಿಶತಕ ಸಾಂಗತ್ಯದಲ್ಲಿ ರಂಗನಾಥ ಸ್ತುತಿ ರೂಪವಾಗಿ ನೀತಿಯನ್ನು ಬೋಧಿಸಿದೆ. ಅಕ್ಷರ ಮಾಲಿಕಾ ಸಾಂಗತ್ಯ ರಂಗನಾಥ ದೇವರ ಮೇಲೆ ಕಕಾರದಿಂದ ಕ್ಷ ಕಾರ ಪರ್ಯಂತ ಅಕ್ಷರ ಮೊದಲಾಗಿಯೂ ಗುಣಿತದಿಂದಲೂ ಕಲ್ಪಿಸಿದ ಸ್ತುತಿಗಳನ್ನೊಳಗೊಂಡಿದೆ.

ಈತನ ಗ್ರಂಥಗಳೆಲ್ಲ ದಿವ್ಯಸೂರಿ ಚರಿತೆ ಒಂದು ಉತ್ತಮ ಗ್ರಂಥ. ಇದರಲ್ಲಿ 14 ಆಶ್ವಾಸಗಳಿವೆ. ಚಿಕ್ಕದೇವರಾಜ ಪ್ರಭುಗಳು ಶ್ರೀರಂಗಾದಿ ದಿವ್ಯಕ್ಷೇತ್ರಗಳ ಮಹಾತ್ಮೆಗಳನ್ನು ಕೇಳುತ್ತಿರುವಲ್ಲಿ ವೈಷ್ಣವ ಸಮುಚಿತ ದಿವ್ಯ ಪ್ರಬಂಧಗಳನ್ನು ರಚಿಸಿದ ದಿವ್ಯಸೂರಿಗಳ ಚರಿತ್ರವನ್ನು ಕೇಳುವ ಆಸೆ ಹುಟ್ಟಿ ಆಸ್ಥಾನ ಪಂಡಿತರನ್ನು ಕುರಿತು, ತಮಿಳು ಭಾಷೆಯಲ್ಲಿ ಕಂಗೊಳಿಸುವ ಆ ಮಹಾಮಹಿಮರ ಚರಿತ್ರೆಯನ್ನು ಕನ್ನಡ ಮಾತಿನಲ್ಲಿ ತಿಳಿಸಲು ಕೇಳಿಕೊಂಡರೆಂದೂ ಅದಕ್ಕೆ ತಾನು ಒಪ್ಪಿ ಹರಿಕೃಪೆಯಿಂದ ಅಂಥ ಕೃತಿಯೊಂದನ್ನು ಬರೆದೆನೆಂದೂ ಕವಿ ಹೇಳಿಕೊಂಡಿದ್ದಾನೆ. ವಿಶಿಷ್ಟಾದ್ವೈತ ಸಿದ್ಧಾಂತಗಳನ್ನು ಪ್ರಚುರಗೊಳಿಸಿದ ಹನ್ನೆರಡು ಜನ ಆಳ್ವಾರರುಗಳ ಜೊತೆಗೆ ಶ್ರೀ ರಾಮಾನುಜಾಚಾರ್ಯ ಚರಿತ್ರೆಯನ್ನೂ ಈ ಕೃತಿಯಲ್ಲಿ ನಿರೂಪಿಸಲಾಗಿದೆ. ಶ್ರೀ ವೈಷ್ಣವ ಗುರುಗಳ ಕಥೆಯನ್ನು ಕನ್ನಡಕ್ಕೆ ತಂದ ಕೀರ್ತಿ ಈತನದು. ಪಂಡಿತ ಎಂ.ಎ. ರಾಮಾನುಜ ಅಯ್ಯಂಗಾರ್ಯರು ಇದನ್ನು ಸಂಪಾದಿಸಿ ಪ್ರಕಟಿಸಿದ್ದಾರೆ (1911).

ಚಿಕುಪಾಧ್ಯಾಯನ ಚಂಪೂ ಗ್ರಂಥಗಳು ಸಂಸ್ಕøತಮಯವಾಗಿ ಪ್ರೌಢವಾಗಿದ್ದರೂ ಸಾಂಗತ್ಯ ಗ್ರಂಥಗಳು ಅಚ್ಚಕನ್ನಡ ಮತ್ತು ದೇಶೀಯ ಶಬ್ದಗಳ ಬಳಕೆಯಿಂದ ಸುಲಲಿತವಾಗಿವೆ. ಈತನ ಗ್ರಂಥರಾಶಿಯ ತುಂಬ ಶ್ರೀವೈಷ್ಣವ ಮತತತ್ತ್ವ, ಸಂಪ್ರದಾಯ, ಚರಿತ್ರೆ ಮುಂತಾದ ವಿಷಯಗಳೇ ಹೆಚ್ಚು. ಸಾತ್ತ್ವಿಕ ಬ್ರಹ್ಮವಿದ್ಯಾವಿಲಾಸವೆಂಬ ಕೃತಿಯಂತೂ ವಿಶಿಷ್ಟಾದ್ವೈತ ಮತವನ್ನು ಸಾಧಾರವಾಗಿ ನಿರೂಪಿಸುತ್ತದೆ. ಈತನ ಸಮಗ್ರ ಗ್ರಂಥರಾಶಿಯನ್ನು 'ರಾಮಾನುಜ ಮತಕೋಶ ಎಂದು ಕರೆಯಲಾಗಿದೆ. ಈತನ ಪಾಂಡಿತ್ಯ ಮತ್ತು ಕವನ ರಚನಾಶಕ್ತಿ ನಿರ್ವಿವಾದದ್ದಾದರೂ ಕವಿತ್ವದ ಮಟ್ಟ ಉನ್ನತವಾದುದುದಲ್ಲ ಎಂದು ವಿದ್ವಾಂಸರ ಮತ.
(ಜೆ.ಎಸ್.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ